ಗ್ರಾಮ ಸೇತು

ಗ್ರಾಮ ಸೇತು ಕಾರ್ಯಾಕ್ರಮವನ್ನು ಡಿಸೆಂಬರ್ ೨೦೧೮ ರಿಂದ ಆರಂಭಿಸಲಾಗಿದ್ದು, ಸಮಗ್ರ ಕಲಿಕಾ ಕಾರ್ಯಾಕ್ರಮದಲ್ಲಿ ತರಬೇತಿ ಪಡೆದು ಒಕ್ಕೂಟದ ಸದಸ್ಯರಾಗಿರುವ ಆಸಕ್ತರು ಇದ್ದಾರೆ. ಗ್ರಾಮ ಸೇತು ಕಾರ್ಯಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವಕರನ್ನು ಪ್ರೇರಕರೆಂದು ಗುರತಿಸಲಾಗಿದ್ದು, ಇವರಿಗೆ ನಿರಂತರ ನೆರವು ಹಾಗೂ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಮಾಹಿತಿ, ಸಲಹೆಗಳನ್ನು ನೀಡಲಾಗುತ್ತದೆ. ಈ ಯುವಜನರು ತಮ್ಮ ಸಮುದಾಯ ಕೆಲಸಗಳಲ್ಲಿ ಪಾಲ್ಗೊಳ್ಳುವುದು, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿಗೆ ಪ್ರೋತ್ಸಾಹ ನೀಡುವುದು; ಸಮುದಾಯ ಜನರನ್ನು ಕ್ರೀಯಾಶೀಲ ನಾಗರಿಕರಾಗಿಸುವ (ಪ್ರಜಾಪ್ರಭುತ್ವ ಮತ್ತು ಪಂಚಾಯತ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ) ಕೆಲಸ ಮಾಡುತ್ತಾರೆ. ಗ್ರಾಮ ಸೇತು ಕಾರ್ಯಾಕ್ರಮದ ಪ್ರೇರಕರು ನೀರು ಸಂರಕ್ಷಣೆ ಮತ್ತು ಕಸ ವಿಲೇವಾರಿ, ಚರಂಡಿ ನಿರ್ವಹಣೆ, ಕೆರೆಗಳ ಸಂರಕ್ಷಣೆ, ಕೈ ತೋಟ ನಿರ್ಮಾಣ ಮುಂತಾದ ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಾರೆ.

೨೦೧೬೧-೧೭ ರಲ್ಲಿ ಸಾವಯವ ಕೃಷಿ ಪ್ರೋತ್ಸಾಹವನ್ನು ಆರಂಭ ಮಾಡಿದ್ದು, ಆ ವರ್ಷದ ಬರದಿಂದಾಗಿ ಸಾವಯವ ಕೃಷಿ ಮಾಡಲು ತುಂಬಾ ಸಮಸ್ಯೆಯಾಗಿತ್ತು. ಆದರೆ ಈ ವರ್ಷ ಅದರಲ್ಲೂ ಕೊವಿಡ್-೧೯ ರ ಪರಿಸ್ಥಿತಿಯಲ್ಲಿ ಸಾವಯವ ಕೃಷಿ ಪ್ರೋತ್ಸಾಹವನ್ನು ಮುಂದುವರಿಸಿದ್ದು, ಸಾಕಷ್ಟು ಮಳೆಯಿಂದಾಗಿ ಉತ್ತಮ ರೀತಿಯ ಫಸಲನ್ನು ತೆಗೆದಿದ್ದು, ಎಲ್ಲಾ ರೀತಿಯ ಉದ್ವೇಗ ಮತ್ತು ಒತ್ತಡವನ್ನು ಕಡಿಮೆ ಮಾಡಿದೆ. ನೆರವು ಪಡೆದವರಲ್ಲಿ ತುಮಕೂರಿನ ಗುಬ್ಬಿ ತಾಲ್ಲೂಕಿನ ಗೀತಾ ತನ್ನ ಭೂಮಿಯಲ್ಲಿ ತುಂಬಾ ಪರಿಶ್ರಮ ಹಾಕಿ ರಾಗಿ, ಹುಚ್ಚೆಳ್ಳು, ಸಿರಿಧಾನ್ಯಗಳನ್ನು ಬೆಳೆದಿದ್ದು, ಅಕ್ಕ-ಪಕ್ಕದ ಭೂಮಿಯವರು ತಿರುಗಿನೋಡುವಂತೆ ಮಾಡಿದ್ದಾರೆ. ಮಹೇಂದ್ರ ಮತ್ತು ಜಯಸುಂದ್ರ ರಾಗಿ ಮತ್ತು ಅವರೆಯನ್ನು ಉತ್ತಮವಾಗಿ ಬೆಳೆದಿದ್ದಾರೆ. ಮಂಜು ಅವರ ಭೂಮಿಯಲ್ಲಿ ಸೂರ್ಯಕಾಂತಿ, ರಾಗಿ, ಕಡ್ಲೆಕಾಯಿ, ಜೋಳ, ಹರಳು ಮತ್ತು ಸಿರಿಧಾನ್ಯಗಳನ್ನು ಬೆಳೆದಿದ್ದಾರೆ. ರೈತರಾದ ಪುಟ್ಟನಪುರದ ಜಯಣ್ಣ ಅವರು ತಮ್ಮ ಭೂಮಿಯಲ್ಲಿ ರಾಗಿ, ಸಾಮೆ ಬೆಳೆದಿದ್ದು ತುಂಬಾ ಖುಷಿಯಾಗಿದ್ದಾರೆ. ನಾಗವಳ್ಳಿ ರೈತರಾದ ಪುಟ್ಟಸ್ವಾಮಿ ಅವರು ಕೃಷಿಯಲ್ಲಿ ತುಂಬಾ ಅನುಭವವನ್ನು ಹೊಂದಿದ್ದು, ತಮ್ಮ ಒಂದು ಎಕರೆ ಭೂಮಿಯಲ್ಲಿ ಸಾವಯವಯುತವಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆದಿದ್ದು, ಹೆಚ್ಚಿನ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇದು ಸ್ಥಳೀಯ ಯುವಜನರು ಮತ್ತು ರೈತರು ಒಂದು ಗುಂಪಾಗಿ ಸುಸ್ಥಿರ ಕೃಷಿ ಮುಂದುವರಿಸಲು ಈ ಪ್ರೋತ್ಸಾಹ ಯೋಜನೆಯನ್ನು ಮುಂದಿನ ವರ್ಷವೂ ಮುಂದುವರಿಸಬೇಕಾಗಿದೆ.