ಸಮಗ್ರ ಕಲಿಕಾ ಕಾರ್ಯಕ್ರಮ

ವೇಗವಾಗಿ ವಿಘಟಿತವಾಗುತ್ತಿರುವ ಗ್ರಾಮೀಣ ಪ್ರಪಂಚದಲ್ಲಿ ಅಲ್ಪ ಕಾಲಾವಧಿಯಲ್ಲಿ ಗ್ರಾಮೀಣ ಯುವಜರನ್ನು ಹೇಗೆ ಒಗ್ಗೂಡಿಸಬಹುದು ?
ವೈಯಕ್ತಿಕ ಮತ್ತು ಸಾಮೂಹಿಕ ಜವಾಬ್ದಾರಿಗಳ ಸಾಮರ್ಥ್ಯವವನ್ನು ಹೇಗೆ
ಅಭಿವೃದ್ಧಿಪಡಿಸಬೇಕು ?
ಸ್ಥಳೀಯ ಜೀವನೋಪಾಯದ ಸಾದನಗಳು ಮತ್ತು ಅವಕಾಶಗಳನ್ನು ವೃತ್ತಿಯ ಅಭಿವೃದ್ಧಿಗೆ ಹೇಗೆ ಜೋಡಿಸಬಹುದು ?
ಸಮಗ್ರ ಕಲಿಕಾ ಕಾರ್ಯಕ್ರಮದ ಮೂಲಕ ಏಳು (೦೭) ತಿಂಗಳ ತರಬೇತಿಯನ್ನು ನೀಡಲಾಗುತ್ತಿದೆ (ತಿಂಗಳಲ್ಲಿ ೧೦ ದಿನಗಳು), ಈ ತರಬೇತಿಯಲ್ಲಿ ಗ್ರಾಮೀಣ ಯುವಜನರು ಅರ್ಥಪೂರ್ಣ ಜೀವನ ನಡೆಸುವುದು ಹೇಗೆ ಎಂಬ ವಿಷಯವನ್ನು ಕೇಂದ್ರಿಕರಿಸಲಾಗುತ್ತಿದೆ. ತರಬೇತಿಯು ಮುಖ್ಯವಾಗಿ ೦೪ ವಿಷಯಗಳನ್ನು ಒಳಗೊಂಡಿದೆ :
(1) ಕೃಷಿ ಮತ್ತು ಪರಿಸರ
(2) ಸಾಮಾಜಿಕ ವಿಷಯಗಳು
(3) ಪೌರತ್ವ
(4) ಸಾಮಾನ್ಯ ಕೌಶಲ್ಯಗಳು: ಆಂಗ್ಲಭಾಷೆ, ಕಂಪ್ಯೂಟರ್, ಲೆಕ್ಕಚಾರ

ಸಾಮಾಜಿಕ ಪರಿವರ್ತನೆಯ ಕಲಿಕೆ ಮತ್ತು ಸ್ಥಳೀಯ ಜ್ಞಾನವೃದ್ಧಿ. ನಾಟಕ, ಹಾಡು ಮತ್ತು ಕಲೆಯ ಮೂಲಕ ವೈಯಕ್ತಿಕ ಬೆಳವಣಿಗೆ, ಆತ್ಮವಿಶ್ವಾಸ, ಸಂವಹನ ಮತ್ತು ನಾಯಕತ್ವದ ಕೌಶಲ್ಯಗಳನ್ನು ಬೆಳಸಲಾಗುತ್ತದೆ.

ಈ ಪ್ರಕ್ರಿಯೆಯ ಬೋಧನಾ ವಿಧಾನವು ಅನುಭವಾತ್ಮಕ ಕಲಿಕೆ ಮೂಲಕ ಸನಿಹದ ಸಮಾಜ ಮತ್ತು ಭೌತಿಕ ಪ್ರಪಂಚ ವಿಷಯಗಳನ್ನು ಅರ್ಥ ಮಾಡಿಸುವುದು ಪಠ್ಯವಾಗಿರುತ್ತದೆ. ಈ ತರಬೇತಿಯಲ್ಲಿ ಕಲಿಕಾರ್ಥಿಗಳ ಅಭ್ಯಾಸಗಳು, ತಾವು ಈಗಾಗಲೇ ಪಡೆದುಕೊಂಡಿರುವ ಅನುಭವವನ್ನು ಪ್ರಶ್ನಿಸುವಂತೆ ಮಾಡಲು ಹಾಗೂ ಈಗಾಗಲೇ ಮನೆ, ಸಮಾಜ, ಶಾಲೆ ಪರಿಸರ ಅವರ ತಲೆಯಲ್ಲಿ ತುಂಬಿರುವ ವಿಷಯಗಳನ್ನು ಪ್ರಶ್ನಿಸುವ ಧೈರ್ಯ ಮತ್ತು ಅವಕಾಶಗಳನ್ನು ಕಲ್ಪಿಸುತ್ತದೆ. ಕೆಲವು ವಿಷಯ ಮತ್ತು ದೃಷ್ಟಿಕೋನಗಳ ಬಗ್ಗೆ ಅವರಿಗೆ ಇರುವ ತಪ್ಪು ಕಲಿಕೆಗಳನ್ನು ವಿವಿಧ ಚಟುವಟಿಕೆಗಳ ಮೂಲಕ ಅರ್ಥ ಮಾಡಿಸಲಾಗುತ್ತದೆ.
ಅವರಿಗೆ ಇಲ್ಲಿ ಯಾವುದೇ ಪರೀಕ್ಷೆ ಇಲ್ಲ/ಪಾಸು-ಫೇಲ್ ಇಲ್ಲ ಎಂಬ ಭರವಸೆ ಮೂಡಿಸಲಾಗುತ್ತದೆ. ಆದರೆ ಕಲಿಕಾರ್ಥಿಗಳ ವೈಯಕ್ತಿಕ ಕಲಿಕೆಯನ್ನು ಗುರುತಿಸಲು ಬೇಕಾದ ವಿವಿಧ ಚಟುವಟಿಕೆಗಳ ಬರವಣಿಗೆಯ ಫೈಲ್ ಇಟ್ಟಿದ್ದು, ಅವರೇ ಅವರ ಕಲಿಕೆಯ ಬೆಳವಣಿಗೆಯನ್ನು ಕೂಡ ಪರಿಶೀಲಿಸಿಕೊಳ್ಳುತ್ತಾರೆ.ಅಲ್ಲದೆ ಕಲಿಕಾರ್ಥಿಗಳಿಗೆ ತಿಂಗಳ ಹಿಮ್ಮಾಹಿತಿ ಮೂಲಕ ಅವರ ಬೆಳವಣಿಗೆ, ಆಸಕ್ತಿ ಮತ್ತು ಮುಂದೆ ಅವರು ಗಮನ ಕೊಡಬೇಕಾದ ವಿಷಯಗಳ ಬಲವರ್ಧನೆಗಾಗಿಮೌಖಿಕವಾಗಿ ಮತ್ತು ಲಿಖಿತವಾಗಿಯೂ ಹಿಮ್ಮಾಹಿತಿ ನೀಡಲಾಗುತ್ತದೆ.ಹಾಗೆಯೇ ಕಲಿಕಾರ್ಥಿಗಳು ತರಬೇತಿಯಲ್ಲಿ ಇಷ್ಟವಾದ ಕಲಿಕೆ, ಇಷ್ಟ ಆಗದ ವಿಷಯಗಳ ಬಗ್ಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಹಿಮ್ಮಾಹಿತಿ ನೀಡುತ್ತಾರೆ. ತರಬೇತಿಯ ಮಧ್ಯಂತರ ಸಮಯದಲ್ಲಿ ಅಧ್ಯಾಪಕ ವರ್ಗ ಕಲಿಕಾರ್ಥಿಗಳ ಮನೆಭೇಟಿ ಮಾಡಿ, ಯುವಜನರ ಮನೆಯ ಪರಿಸ್ಥಿತಿ, ಅವರ ಸಾಮಾಜಿಕ ಜೀವನದ ಹಿನ್ನೆಲೆ ತಿಳಿಯುವುದರ ಜೊತೆಗೆ ತರಬೇತಿ ಮತ್ತು ತಮ್ಮ ಮಕ್ಕಳ ಕಲಿಕೆಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಪೋಷಕರ ಅಭಿಪ್ರಾಯಗಳು, ಅನುಭವಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ತರಬೇತಿಯ ಕೊನೆಯ ಘಟ್ಟ ಕಾರ್ಯಕ್ರಮದಲ್ಲಿ (ಓಪನ್ ಡೇ) ಕಲಿಕಾರ್ಥಿಗಳ ಕಲಿಕೆ, ಅನುಭವ, ಅವರ ಕೆಲಸಗಳನ್ನು ಅರ್ಥಮಾಡಿಕೊಳ್ಳಲು, ಪರಿಶೀಲಿಸಲು ಪೋಷಕರು, ಸಮುದಾಯದವರಿಗೆ ಅವಕಾಶವಿದ್ದು, ಪ್ರಾತ್ಯಕ್ಷಿಕೆ ಮೂಲಕ ಕಲಿಕಾರ್ಥಿಗಳು ತಮ್ಮ ಕೆಲಸವನ್ನು ತೋರಿಸುತ್ತಾರೆ. ಕಲಿಕಾರ್ಥಿಗಳ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ತಮ್ಮ ಕಲಿಕೆ ಮತ್ತು ಕೆಲಸಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರಸ್ತುತಿಪಡಿಸುತ್ತಾರೆ.ತರಬೇತಿ ನಂತರ ಕಲಿಕಾರ್ಥಿಗಳ ಜೊತೆ ನಿರಂತರ ಅನುಪಾಲನೆ ಮಾಡುತ್ತಾ, ಕೃಷಿ ಮತ್ತು ತಮ್ಮ ಹಳ್ಳಿಯಲ್ಲಿ ಉಳಿದು ಜೀವನೋಪಾಯದ ಅವಕಾಶಗಳನ್ನು ಕಂಡುಕೊಳ್ಳುವವರಿಗೆ ಪುನರ್ಚಿತ್ ನೆರವು ನೀಡುತ್ತದೆ.

೬ನೇ ಹಂತದ ಸಮಗ್ರ ಕಲಿಕಾ ತರಬೇತಿಯ ಯುವಜನ ಕಲಿಕಾರ್ಥಿಗಳು ಜುಲೈನಲ್ಲಿ ಸೇರಿ ಡಿಸೆಂಬರ್ ೨೦೧೮ ಕ್ಕೆ ಪೂರ್ಣಗೊಳಿಸಿದರು. ಈ ತಂಡವು ತರಬೇತಿ ಪ್ರಕ್ರಿಯೆಯಲ್ಲಿ ಬಹಳ ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರು. ಚಾಮರಾಜನಗರ ಜಿಲ್ಲೆ ಹೊರತುಪಡಿಸಿ ಇತರೆ ಎರಡು ಜಿಲ್ಲೆಯ ಯವಜನರು ಈ ತರಬೇತಿಯಲ್ಲಿ ಭಾಗವಹಿಸಿದ್ದರು. ಮುಂದೆ ಐಎಲ್‌ಪಿ ತರಬೇತಿಯನ್ನು ವಸತಿ ಸಹಿತವಾಗಿ ಮಾಡಲು ಯೋಜಿಸಿದ್ದು, ಈ ಕಲಿಕಾ ತರಬೇತಿಗೆ ಇತರೆ ಜಿಲ್ಲೆಯ ಯುವಜನರನ್ನು ಸೇರಿಸಿಕೊಳ್ಳಲು ಚಿಂತಿಸಲಾಗಿದೆ. ತರಬೇತಿ ಪೂರ್ಣಗೊಳಿಸಿದ ಹಲವರು ಹೊನ್ನೇರು ಯುವಜನ ಗ್ರಾಮೀಣ ಒಕ್ಕೂಟದ ಸದಸ್ಯರಾಗಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಮಗ್ರ ಕಲಿಕೆ ಕಾರ್ಯಕ್ರಮದಲ್ಲಿ ಇರಬೇಕಾಗಿರುವುದು ಗ್ರಾಮೀಣ ಯುವಜನರ ಅವಶ್ಯಕತೆಗಳನ್ನು ಗುರುತಿಸಿ ಆ ಮೂಲಕ ಸುಸ್ಥಿರತೆ ಜೊತೆ ಬಹುಜ್ಞಾನ ಕಲಿಕೆಯ ಸಾಮರ್ಥ್ಯವೃದ್ಧಿ, ತಾಂತ್ರಿಕತೆ, ಬಂಡವಾಳ, ಪೌರತ್ವ, ಸಮಾಜ ಮತ್ತು ಶ್ರಮದ ಬಗ್ಗೆ ಹೇಳಿಕೊಡುವ ಬೋಧನಾ ವಿಧಾನದಗಳು ಇರಬೇಕು.

ಈವರೆಗೆ ಆರು ತಂಡದ ತರಬೇತಿ ನೀಡಲಾಗಿದೆ. ಹೊಸ ಬೋಧನಾ ವಿಧಾನದ ಮೂಲಕ ಬೋಧನಾ ಕಲಿಕಾ ಸಾಮಾಗ್ರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇತರೆ ಸಂಸ್ಥೆಗಳು ಮತ್ತು ಶಿಕ್ಷಣ ಇಲಾಖೆಗಳ ಜೊತೆ ಹಂಚಿಕೊಳ್ಳಲಾಗುವುದು.

ಸಮಗ್ರ ಕಲಿಕಾ ಕಾರ್ಯಕ್ರಮದ ಕಲಿಕಾರ್ಥಿಗಳ ಹಿಮ್ಮಾಹಿತಿ
“ಮೊದಲು ನಾನು ಪುನರ್ಚಿತ್‌ಗೆ ಬರಲು ಭಯ ಹಾಗೂ ನಾಚಿಕೆಯಾಗುತ್ತಿತು. ಈಗ ನನಗೆ ಪುನರ್ಚಿತ್ ಬಿಟ್ಟು ಹೋಗಲು ಹೆದರಿಕೆ ಆಗುತ್ತಿದೆ.”

“ಹಿಂಜರಿಕೆ ಮತ್ತು ಹೆದರಿಕೆ ಹೋಗಿದೆ. ಆತ್ಮವಿಶ್ವಾಸ ವೃದ್ಧಿಸಿದೆ. ಸ್ನೇಹ ಹಾಗೂ ಸಹಕಾರ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಗಿದೆ.”

“ಬೌದ್ಧಿಕ ಹಾಗೂ ಪ್ರಶ್ನಿಸುವ ಸಾಮರ್ಥ್ಯ, ಹೊಸ ವಿಷಯಗಳ ಬಗ್ಗೆ ಆಲೋಚನೆ ಮತ್ತು ಅರ್ಥಮಾಡಿಕೊಂಡು ಹೇಗೆ ಬೆಳೆಯುವುದು ಎಂಬುದನ್ನು ಕಲಿತೆ.”

“ಹಿಂದೆ ಶಾಲೆ ಕಲಿಕೆ ಅಂಕಗಳನ್ನು ಪಡೆಯಲು ಮಾತ್ರ ಎನ್ನುವಂತಾಗಿತ್ತು. ನಮ್ಮ ಜೀವನದ ಬಗ್ಗೆ ಕಲಿಯಲು ಸಾಧ್ಯವಿದೆ. ನಮ್ಮ ಕಷ್ಟಗಳನ್ನು ಹಂಚಿಕೊಳ್ಳಲು ಸಾಧ್ಯವಿದೆ ಇಲ್ಲಿ. ಮೂರು ವರ್ಷಗಳು ಕಾಲೇಜಿನಲ್ಲಿ ಕೆಲಸ ಮಾಡಿದ ಅನುಭವ ಮತ್ತು ನನೆಗೆ ಆದ ಸಂಕಟಗಳ ಬಗ್ಗೆ ಹೇಳಿಕೊಳ್ಳುವ ಅವಕಾಶಗಳೇ ಸಿಗಲಿಲ್ಲ. ಆ ಸಮಯದಲ್ಲಿ ಕೇವಲ ಹಣಕಾಸಿಗೆ ಪ್ರಾಮುಖ್ಯತೆ ನೀಡಿದೆ.ಆದರೆ ನಾನು ಇಲ್ಲಿ (ಸಮಗ್ರ ಕಲಿಕೆಯಲ್ಲಿ) ಶಾಲೆಯಲ್ಲಿ ನಾನು ಏನನ್ನು ಕಲಿಯಲು ಸಾಧ್ಯವಾಗಿಲ್ಲವೋ ಅದನ್ನು ಇಲ್ಲಿ ನಾನು ಕಲಿತಿದ್ದೇನೆ. ಈಗ ನನ್ನ ಜೀವನ ಮತ್ತು ಗುರಿಯ ಬಗ್ಗೆ ಯೋಚಿಸುತ್ತಿದ್ದೇನೆ.”

“ನಾನು ಈ ಕಾರ್ಯಕ್ರಮದಲ್ಲಿ ಏನು ಕಲಿತಿದ್ದೇನೆ ಎಂಬುದನ್ನು ನನ್ನ ಕುಟುಂಬದವರು, ಸ್ನೇಹಿತರ ಜೊತೆ ಹಂಚಿಕೊಂಡಿದ್ದೇನೆ. ಅವರಿಗೆಲ್ಲಾ ನನ್ನನ್ನು ನೋಡಿ ಆಶ್ಚರ್ಯ ಮತ್ತು ಖುಷಿಯಾಯಿತು.”

“ಇತರರ ಜೊತೆ ಕಳೆ ತೆಗೆಯುವುದು ಮತ್ತು ಕಟಾವು ಕೆಲಸ ಮಾಡುವುದು ನನಗೆ ಉತ್ತಮ ಅನುಭವವಾಗಿದೆ. ಈ ತರಹ ನಾನು ನಮ್ಮ ಹೊಲದಲ್ಲೂ ಕೆಲಸ ಮಾಡಬಹುದು ಎಂಬುದನ್ನು ಆಲೋಚಿಲು ಆರಂಭಿಸಿದ್ದೇನೆ.”

“ನಾವು ನೋಡಿಲ್ಲದ ಸ್ಥಳದಲ್ಲಿ ಹೋಗಿ ಕೆಲಸ ಮಾಡುವ ಬದಲು ನಮ್ಮ ಹಳ್ಳಿಯಲ್ಲೇ ಕೆಲಸ ಮಾಡುವುದು ಉತ್ತಮ.”

“ಪಠ್ಯಪುಸ್ತಕ ಮೂಲಕ ಕಲಿಯುವ ಬದಲಿಗೆ ಇಲ್ಲಿ ಪುಸ್ತಕವಿಲ್ಲದೆ ನಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ಕಲಿತೆ.”

“ಕುಟುಂಬದಲ್ಲಿ ಮಹಿಳೆಯರು ಎಲ್ಲ ರೀತಿಯ ಶ್ರಮದ ಕೆಲಸ ಮಾಡುತ್ತಾರೆ ಎಂಬುದು ಈಗ ನನಗೆ ಅರ್ಥವಾಗಿದೆ. ಮನೆ ಬಳಕೆಗಾಗಿ ನೀರು ತರುವುದು ಮತ್ತು ಮನೆಯ ಕೆಲಸಗಳಲ್ಲಿ ಸಹಾಯ ಮಾಡುವುದನ್ನು ನಾನು ಇಲ್ಲಿ ಕಲಿತೆ.”

“ದೂರದರ್ಶನದಲ್ಲಿ ಧಾರವಾಹಿಗಳನ್ನು ನೋಡಲು ಕಾಯುವಂತೆ, ಸಮಗ್ರ ಕಲಿಕಾ ತರಗತಿಗೆ ಬರುವುದಕ್ಕೆ ಕಾಯುತ್ತಿದ್ದೆ… ”

ಪೋಷಕರ ಹಿಮ್ಮಾಹಿತಿ
ಹಲವಾರು ಪೋಷಕರು ತಮ್ಮ ಮಕ್ಕಳ ಮೇಲೆ ಆದ ಸಮಗ್ರ ಕಲಿಕಾ ಕಾರ್ಯಕ್ರಮದ ಪ್ರಭಾವಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
“ಅವನು ಅಲ್ಲಿ-ಇಲ್ಲಿ ಅಲೆದಾಡುವುದನ್ನು ನೋಡಿ ನನಗೆ ಯೋಚನೆ ತಂದಿತ್ತು. ಈಗ (ಸಮಗ್ರ ಕಲಿಕೆಗೆ ಬಂದ ಮೇಲೆ) ಆತ ಕೃಷಿ ಬೇಸಾಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದು, ವ್ಯವಸಾಯದಲ್ಲಿ ಆಸಕ್ತಿ ತೋರುತ್ತಿದ್ದಾನೆ.”

“ಅವಳು ನಾಚಿಕೆ ಮತ್ತು ಅಂತರ್ಮುಖಿ ಹುಡುಗಿಯಾಗಿದ್ದಳು. ಈಗ ಅವಳ ಅಪರಿಚಿತರೂ ಸೇರಿದಂತೆ ಎಲ್ಲರೊಡನೆ ಮಾತನಾಡುತ್ತಾಳೆ.”

“ಪುನರ್ಚಿತ್‌ಗೆ ಹೋಗಲು ಅವರು ಕಾಯುತ್ತಿರುತ್ತಾರೆ.ಇದು ಬೇರೆ ಕಾರ್ಯಕ್ರಮಗಳ ತರಹ ಅಲ್ಲ. ನಾವು ಕೂಡ ಅಲ್ಲಿಗೆ ಹೋಗಿ ಏನು ಮಾಡುತ್ತಾರೆ ಎಂದು ನೋಡಬಹುದು.”

“ಅವಳು ನ್ಯಾಯಬೆಲೆ ಅಂಗಡಿಗೆ ಹೋಗಿ ಏಕೆ ನಮಗೆ ಆಹಾರಧಾನ್ಯ ಕೊಟ್ಟಿಲ್ಲ ಎಂದು ಕೇಳಿದಳು. ಇದರಿಂದ ಅವರು ನಮ್ಮ ರೇಷನ್ ಪುಸ್ತಕ ವಾಪಸ್ಸು ಕೊಡಬೇಕಾಯಿತು. ಈಗ ಕೂಪನ್ ಅಕ್ಕಿ ಸಿಗುತ್ತಿದೆ. ಈ ರೀತಿ ಕೇಳಲು ಸಾಧ್ಯವಾಗಿರುವುದು, ನಾಗವಳ್ಳಿಯಲ್ಲಿ ಪಡೆದ ಕಲಿಕಾ ತರಬೇತಿಯ ಪ್ರಭಾವದಿಂದ.”

ನಾಲ್ಕು ಹಂತದ ಸಮಗ್ರ ಕಲಿಕಾ ಕಾರ್ಯಕ್ರಮದ (೨೦೧೪-೨೦೧೭) ತರಬೇತಿಗೆ ಹಣಕಾಸಿನ ನೆರವನ್ನು ಒದಗಿಸದ್ದು ವಾಟಿಸ್ (ವಿಪ್ರೊ, ಅಪ್ಲಾಯಿಂಗ್ ಥಾಟ್ ಇನ್ ಸ್ಕೂಲ್), ಬೆಂಗಳೂರು.