ಇತ್ತೀಚಿನ ಕಾರ್ಯಕ್ರಮಗಳು

ಮಕ್ಕಳ ಬೇಸಿಗೆ ಶಿಬಿರ ಮೇ ೧೧ ರಿಂದ ೧೩, ೨೦೧೯

ಪುನರ್ಚಿತ್ ಕಲಿಕಾ ಕೇಂದ್ರದಲ್ಲಿ ಮೂರು ದಿನಗಳು ನಡೆದ ಮಕ್ಕಳ ಬೇಸಿಗೆ ಶಿಬಿರದಲ್ಲಿ ೫ ರಿಂದ ೧೩ ವಯೋಮಾನದ ೬೫ ಮಕ್ಕಳು ಭಾಗವಹಿಸಿದ್ದರು. ಈ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ KREATIVE ಶಾಲೆಯ ನಾಗವೇಣಿ ಅವರು, ಹೈದರಬಾದ್‌ನ ಟಿಐಎಫ್‌ಆರ್‌ನ ಅನು ಮತ್ತು ಮದ್ದೂರಿನ ಪುನಿತ್ ಅವರು ಭಾಗವಹಿಸಿದರು. ಶಿಬಿರದ ಚಟುವಟಿಕೆಗಳಲ್ಲಿ ಪುನರ್ಚಿತ್ ತಂಡ ಸುಮ, ಮಾಲಾ, ಸುಂದ್ರಮ್ಮ ಮತ್ತು ಮಹೇಂದ್ರ ಸಹಾಯ ಮಾಡಿದರು. ಶಿಬಿರದಲ್ಲಿ ಮುಖ್ಯವಾಗಿ ಚಿತ್ರ ರಚನೆ, ಚಟುವಟಿಕೆಗಳು, ಹಾಡು ಮತ್ತು ನೃತ್ಯ, ಗಾಳಿಪಟ ತಯಾರಿ ಮತ್ತು ಹಾರಾಟ, ಸರಳ ಸೂಕ್ಷ್ಮದರ್ಶಕ ಯಂತ್ರಗಳ (FOLDSCOPE) ರಚನೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಯಿತು.


ಯುವಚೇತನ ತರಬೇತಿ

ಮೆಟ್ರಿಕ್ ಮತ್ತು ಪಿಯುಸಿ ಶಿಕ್ಷಣ ಪಡೆದ ಸ್ಥಳೀಯ ೧೩ ಯುವಜನರಿಗೆ ಪುನರ್ಚಿತ್ ಕಲಿಕಾ ಕೇಂದ್ರದಲ್ಲಿ ಎರಡು ದಿನಗಳ (ಏಪ್ರಿಲ್ ೨೬ ಮತ್ತು ೨೭, ೨೦೧೯) ಯುವಚೇತನ ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಾಗಾರದಲ್ಲಿ ಸೃಜನಾತ್ಮಕ ಬರವಣಿಗೆ, ನಮ್ಮ ಪರಿಸರವನ್ನು ಅರ್ಥ ಮಾಡಿಕೊಳ್ಳುವುದು, ನಾಗರಿಕರ ಜವಾಬ್ದಾರಿಗಳು, ಲಿಂಗತ್ವದ ವಿಷಯಗಳು, ಸಂವಹನ ಮತ್ತು ನಿರಂತರ ಕಲಿಕೆ ಚಟುವಟಿಕೆಗಳನ್ನು ಮಾಡಿದ್ದು, ಯುವಜನರು ಬಹಳ ಆಸಕ್ತಿಯಿಂದ ಭಾಗವಹಿಸಿದ್ದರು. ಮೈಸೂರಿನ ಶ್ರೀಮತಿ ಇಂದುಮತಿ ಅವರು ಯುವಜನರು ಶಿಕ್ಷಣ ಮುಂದುವರಿಸಲು ಯಾವ ಯಾವ ವಿಷಯಗಳನ್ನು ಆಯ್ಕೆ ಮಾಡಿಕೊಂಡರೆ ಏನು ಸಾಧ್ಯತೆಗಳಿವೆ ಹಾಗೂ ವೃತ್ತಿಗಳ ಆಯ್ಕೆಗೆ ಸಂಬಂಧಿಸಿದಂತೆ ಅರ್ಧ ದಿನ ವಿಷಯ ತಿಳಿಸಿಕೊಟ್ಟರು. ಕಳೆದ ವರ್ಷ ನಡೆದ ಯುವಚೇತನ ತರಬೇತಿಯಲ್ಲಿ ಭಾಗವಹಿಸಿದ್ದ ಕೆಲವು ಹೆಣ್ಣು ಮಕ್ಕಳಲ್ಲಿ ಕೆಲವರು ಈ ತರಬೇತಿಯಲ್ಲೂ ಭಾಗವಹಿಸಿದ್ದು, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಭವಿಷ್ಯದಲ್ಲಿ ತಾವು ಯಾವ ರೀತಿಯ ಶಿಕ್ಷಣ ಪಡೆದುಕೊಳ್ಳಬೇಕು ಮತ್ತು ಉನ್ನತ ಶಿಕ್ಷಣ ಪಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಸ್ಟಷ್ಟತೆ ಹೊಂದಿದ್ದಾರೆ.


ಸೆಪ್ಟೆಂಬರ್ ೨೯, ೨೦೧೮

ಹಿತ್ತಲು ಹಿತ ಮತ್ತು ಬೀಜ ಬಳುವಳಿ ಕಾರ್ಯಕ್ರಮ, ಸೆಪ್ಟೆಂಬರ್ ೨೯, ೨೦೧೮
ಕೈ ತೋಟವು ಉತ್ತಮ ಪರಿಸರ ನಿರ್ಮಾಣದೊಂದಿಗೆ ದಿನ ನಿತ್ಯ ಕುಟುಂಬಕ್ಕೆ ಬೇಕಾದಂತಹ ಹಲವು ರೀತಿಯ ತರಕಾರಿಗಳು, ಸೊಪ್ಪು, ಹಣ್ಣುಗಳು ಮತ್ತು ಹೂಗಳನ್ನು ಕೊಡುವ ನಿಧಿಯಾಗಿ ಕೆಲಸ ಮಾಡುತ್ತದೆ. ಕೈ ತೋಟದಿಂದ ನಮಗೆ ತಾಜತನದಿಂದ ಕೂಡಿದ ವಿಷಮುಕ್ತ, ಪೌಷ್ಠಿಕಾಂಶವುಳ್ಳ ಆಹಾರ ಲಭ್ಯವಾಗುವ ಜೊತೆಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯ ಔಷಧವಾಗಿ ಕೆಲಸ ಮಾಡುತ್ತದೆ. ಮಹಿಳೆಯರು ಸಣ್ಣ ಪ್ರಮಾಣದಲ್ಲಿ ಆರ್ಥಿಕವಾಗಿ ಸ್ವಾಲಂಬಿಯಾಗಲು ನೆರವಾಗುತ್ತದೆ. ಕೈ ತೋಟವು ನಾಟಿ ಬೀಜಗಳ ಬಳಕೆ ಮತ್ತು ಬೀಜಗಳ ಪುನರುತ್ಪಾದನೆ ಮಾಡಲು ಸಹಾಯವಾಗುತ್ತದೆ. ಹಾಗಾಗಿ ಹಿಂದಿನಿಂದಲ್ಲೂ ಇರುವ ಈ ಹಿತ್ತಲು ತರಕಾರಿ ಬೆಳೆಯುವವರ ಪ್ರಮಾಣ ಕಳೆದ ಒಂದುವರೆ ದಶಕದಿಂದ ಬಹಳ ಕಡಿಮೆಯಾಗುತ್ತಿದ್ದು, ನಾಟಿ ಬೀಜಗಳ ಕೊರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪುನರ್ಚಿತ್ ಸಂಸ್ಥೆಯು ತಮ್ಮ ಕೈ ತೋಟದಲ್ಲಿ ಸಾವಯವ ನಾಟಿ ಬೀಜಗಳನ್ನು ಬೆಳೆದು ಸ್ಥಳೀಯ ಜನರಿಗೆ ಮತ್ತು ಹೊರಗಿನ ಹಲವರಿಗೆ ಹಂಚಿಕೊಳ್ಳುತ್ತಾ ಬರುತ್ತಿದೆ. ಹಿತ್ತಲ ಹಿತ ಮತ್ತು ಬೀಜ ಬಳುವಳಿ ಕಾರ್ಯಾಕ್ರಮದ ಮೂಲಕ ಸ್ಥಳೀಯ ಕೈ ತೋಟ ನಿರ್ಮಾಣಕಾರರು ಮತ್ತು ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಸೆಪ್ಟಂಬರ್ ೨೯, ೨೦೧೮ ರಂದು ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದಲ್ಲಿರುವ ಪುನರ್ಚಿತ್ ಕಲಿಕಾ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪದ್ಮಮ್ಮ ಕಣಗಾಲ್, ಸಂಗೀತ, ವಾಸು, ಹೊನ್ನೂರು ಪ್ರಕಾಶ್, ಮಹದೇವಸ್ವಾಮಿ ದೊಡ್ಡರಾಯಪೇಟೆ, ಮಾರ್ಗದರ್ಶಿ ಸಂಸ್ಥೆಯ ರಾಜಣ್ಣ ಮತ್ತವರ ತಂಡದವರು, ದೀನಬಂದು ಸಂಸ್ಥೆಯ ಬಳಗದವರು, ಕೋಡಿಹಳ್ಳಿ ಚಂದ್ರಶೇಖರ್, ಕೆ.ವೆಂಕಟರಾಜು ಅವರು, ಆಹ್ವಾನಿತ ಹಲವು ಸ್ನೇಹಿತರು, ಸಾವಯವ ಕೃಷಿ ಹಾಗೂ ಬೀಜ ಸಂರಕ್ಷಣೆಯ ಬಗ್ಗೆ ಆಸಕ್ತಿಯಿದ್ದ ಹಲವು ಜನರು, ನಾಗವಳ್ಳಿ ಗ್ರಾಮದ ಮಕ್ಕಳು, ಹಿರಿಯ ಮಹಿಳೆಯರು ಮತ್ತು ಪುರುಷರು, ಹೊನ್ನೇರು ತಂಡದವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು ಬೀಜದಿಂದಲ್ಲೇ ಎಂಬ ಗೀತೆಯನ್ನು ಹಾಡಿದ್ದು, ವಾಸು ಮತ್ತು ಯುವಜನರು ಹಾಡಿದ ರೈತರು ಬರುವರು ದಾರಿ ಬಿಡಿ ಗೀತೆಗಳು ಕಾರ್ಯಾಕ್ರಮಕ್ಕೆ ಕಳೆ ಕಟ್ಟಿದವು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪದ್ಮಮ್ಮ ಕಣಗಾಲ್ ಅವರು, ಬೀಜ ಬೆಳವಣಿಗೆಗೆ ಮೊದಲು ಮಣ್ಣು ಮತ್ತು ಬೆಳೆಗಳಿಗೆ ಮಾಡಬೇಕಾದ ಮುಚ್ಚಿಗೆ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಗೋಮೂತ್ರದಿಂದ ಯೂರಿಯಾ ಸಿದ್ಧಪಡಿಸಿ ಬಳಸುವ ಕ್ರಮಗಳ ಬಗ್ಗೆ ಹಾಗೂ ಬೀಜ ಸಂರಕ್ಷಣೆ ಪ್ರಾಮುಖ್ಯತೆ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಾಸು ಅವರು ಬೀಜಕ್ಕೂ ನಮಗೂ ಇರುವ ಸಂಬಂಧ, ಬೀಜ ಸಂಸ್ಕೃತಿಯ ಮುಖ್ಯತೆ ಬಗ್ಗೆ ಮಾತನಾಡಿದರು. ಹಾಗೆಯೇ ನಾವು ಕಂಪನಿಗಳ ಗುಲಾಮರಾಗುತ್ತಿರುವ ಪರಿಸ್ಥಿತಿ, ರಸಾಯನಿಕ ಮತ್ತು ಕ್ರಿಮಿನಾಶಕದ ಬಳಕೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ವಾಸ್ತವದ ವಿಚಾರಗಳನ್ನು ಜನರ ಮುಂದೆ ಬಿಚ್ಚಿಟ್ಟರು. ಕಾರ್ಯಕ್ರಮದಲ್ಲಿ ಸಾವಯವ ತರಕಾರಿಗಳು ಮತ್ತು ಬೀಜಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಅತಿಥಿಗಳಿಗೆ ಕೈ ತೋಟದ ಪರಿಚಯ ಮಾಡಿಕೊಡುವ ಜೊತೆಗೆ ಕೆಲವು ಬೀಜಗಳನ್ನು ಉಚಿತವಾಗಿ ಹಂಚಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿಶೇಷವಾಗಿ ಹೊಸದಾಗಿ ಸಿದ್ಧಪಡಿಸಲಾಗಿದ್ದ ಸೋಲಾರ್ ಡ್ರೈಯರ್‌ನ್ನು (ತರಕಾರಿ, ಹಣ್ಣು, ಸೊಪ್ಪು, ಹುಲ್ಲು ಒಣಗಿಸುವುದು) ಮಾರಾಟಕ್ಕೆ ಇಡಲಾಗಿತ್ತು.


ಜುಲೈ ೧೯, ೨೦೧೮

ನಾಗವಳ್ಳಿ ಪುನರ್ಚಿತ್ ಕಲಿಕಾ ಕೇಂದ್ರದಲ್ಲಿ ೬ನೇ ಹಂತದ ಸಮಗ್ರ ಕಲಿಕಾ ಕಾರ್ಯಾಕ್ರಮದ ಉದ್ಘಾಟನೆ ಮಾಡಲಾಯಿತು. ಈ ತರಬೇತಿಗೆ ಚಾಮರಾಜನಗರ ಜಿಲ್ಲೆಯಿಂದ ೧೨ ಜನ ಕಲಿಕಾರ್ಥಿಗಳು ಹಾಗೂ ಜಿಲ್ಲೆಯ ಹೊರಗಿನಿಂದ ೦೮ ಜನ ಕಲಿಕಾರ್ಥಿಗಳು ಭಾಗವಹಿಸಿದರು.


ಮೇ ೨ ರಿಂದ ೪, ೨೦೧೮

ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ವೀಣಾ ಬಸವರಾಜಯ್ಯ ಮತ್ತು ವಿನಯ್ ನಡೆಸಿಕೊಟ್ಟರು. ಈ ಶಿಬಿರದಲ್ಲಿ ಮಕ್ಕಳು ಮುಕ್ತವಾಗಿ ಭಾಗವಹಿಸುವಂತೆ ಮಾಡಿ, ಸುಲಭವಾಗಿ ಅಭಿನಯಿಸುವುದು ಹೇಗೆ ಎಂಬುದನ್ನು ಹೇಳಿಕೊಡಲಾಯಿತು. ಮಕ್ಕಳು ಬಹಳ ಆಸಕ್ತಿ ಮತ್ತು ಖುಷಿಯಿಂದ ಚಟುವಟಿಕೆಗಳಲ್ಲಿ ಭಾಗವಹಿಸಿದರು.


ಏಪ್ರಿಲ್ ೭ ರಿಂದ ೧೩, ೨೦೧೮

ಪುನರ್ಚಿತ್‌ನ ಯುವಜನರು ಮತ್ತು ವನಸ್ತ್ರೀ ಸಂಘದ ಮಹಿಳೆಯರಿಗೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮಣ್ಣು-ಕಣ್ಣು ಛಾಯಚಿತ್ರ ತರಬೇತಿಯನ್ನು (ತರಬೇತಿ ನೀಡಿದವರು ಮ್ಯಾಟ್ ಆಂಡರ್‌ಸನ್) ನೀಡಿದ್ದು, ಈ ತರಬೇತಿಯಿಂದ ಮೂಡಿಬಂಧ ಛಾಯಚಿತ್ರಗಳ ಪ್ರದರ್ಶನವನ್ನು ಬೆಂಗಳೂರಿನ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಏರ್ಪಡಿಸಲಾಗಿತ್ತು. ಈ ಪ್ರದರ್ಶನದಲ್ಲಿ ಹೆಚ್ಚಿನ ಜನರು ಭಾಗವಹಿಸಿದ್ದು, ಸುದ್ಧಿಮಾಧ್ಯಮದವರು ವರದಿ ಮಾಡಿದರು.


ಮಾರ್ಚ್ ೧೨, ೨೦೧೮

ಪುನರ್ಚಿತ್ ಕೇಂದ್ರದಲ್ಲಿ ಒಂದು ದಿನದ ಬೀಜ ಬಳುವಳಿ (ಬೀಜ ಹಂಚಿಕೆ) ಕಾರ್ಯಾಕ್ರಮವನ್ನು ಆಯೋಜನೆ ಮಾಡಿದೆವು. ಈ ಕಾರ್ಯಕ್ರಮದ ಉದ್ಧೇಶ ಸ್ಥಳೀಯ ಹಾಗೂ ಸಾವಯವ ಬೀಜಗಳನ್ನು ಉಳಿಸಿ ಬಳಸುವುದು ಮತ್ತು ಸಂರಕ್ಷಣೆ ಮಾಡುವುದಾಗಿತ್ತು. ಈ ಕಾರ್ಯಾಕ್ರಮದಲ್ಲಿ ಚಾಮರಾಜನಗರ ಜಿಲ್ಲೆಯ ಸಾವಯವ ಕೃಷಿಕರಾದ ಶ್ರೀಮತಿ ಕಮಲಮ್ಮ, ಶ್ರೀ ಮಹದೇವಸ್ವಾಮಿ ಮತ್ತು ಶ್ರೀ ಶಿವಕುಮಾರ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಾಕ್ರಮದಲ್ಲಿ ವೈವಿಧ್ಯಮಯ ಬೀಜಗಳು (ಕಾಳುಗಳು, ಎಣ್ಣೆಕಾಳುಗಳು, ತರಕಾರಿಗಳು, ಧಾನ್ಯಗಳು ಮತ್ತು ಹಣ್ಣುಗಳು) ತಾಜತನದಿಂದ ಕೂಡಿದ ತರಕಾರಿಗಳು, ಬೇರುಗಳು ಮತ್ತು ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು. ನಾಗವಳ್ಳಿ ಗ್ರಾಮದ ರೈತರು ಸೇರಿದಂತೆ ಬೇರೆ ಭಾಗದಿಂದ ಬಂದಿದ್ದ ನೂರು ಜನರು ಈ ಕಾರ್ಯಾಕ್ರಮದಲ್ಲಿ ಭಾಗವಹಿಸಿದರು.


ಫೆಬ್ರವರಿ ೨೬, ೨೦೧೮:

ಮೇ ತಿಂಗಳಲ್ಲಿ ಬರಲಿದ್ದ ರಾಜ್ಯ ವಿಧಾನಸಭಾ ಚುನಾವಣೆಯನ್ನು ಎದುರಿಸುವ ಭಾಗವಾಗಿ ಗ್ರಾಮೀಣ ಯುವಜನರನ್ನು ಸಿದ್ಧಪಡಿಸುವ ಪ್ರಯತ್ನ ಮಾಡಿದ್ದು, ಸಂಪನ್ಮೂಲ ವ್ಯಕ್ತಿ ಶ್ರೀ. ತಿಪ್ಪೇಸ್ವಾಮಿ ಅವರು ಪ್ರಜಾಪ್ರಭುತ್ವದ ವಿಷಯಗಳ ಮೇಲೆ ಚರ್ಚೆಯನ್ನು ನಡೆಸಿದರು. ಈ ಚರ್ಚೆಗೆ ಸಮಗ್ರ ಕಲಿಕಾ ಕಾರ್ಯಾಕ್ರಮದ ಹಳೆಯ ಕಲಿಕಾರ್ಥಿಗಳು ಮತ್ತು ಸ್ಥಳೀಯ ಯುವಜನರನ್ನು ಆಹ್ವಾನಿಸಲಾಗಿತ್ತು. ಮುಖ್ಯವಾಗಿ ಪ್ರಜಾಪ್ರಭುತ್ವದ ಉದ್ದೇಶಗಳು, ಪ್ರಕ್ರಿಯೆಗಳು, ಸವಾಲುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅಲ್ಲದೆ ಸಂವಿಧಾನ ಮತ್ತು ಪ್ರಸ್ತುತದ ವಿಷಯಗಳನ್ನು ಇಟ್ಟುಕೊಂಡು ಚರ್ಚೆ ಮಾಡಲಾಯಿತು.


ಸೆಪ್ಟೆಂಬರ್ ೨ ೨೦೧೭:
ಸಿರಿಧಾನ್ಯಗಳ ಪರಿಚಯ ಕಾರ್ಯಕ್ರಮ

ಸೆಪ್ಟೆಂಬರ್ ೨, ೨೦೧೭ ರಂದು ಪುನರ್ಚಿತ್ ಕಲಿಕಾ ಕೇಂದ್ರಲ್ಲಿ ಒಂದು ದಿನದ ಸಿರಿಧಾನ್ಯ ಪರಿಚಯ ಕಾರ್ಯಕ್ರಮವನ್ನು ಆಯೋಜಿಲಾಗಿತ್ತು. ಇದರ ಭಾಗವಾಗಿ ಪುನರ್ಚಿತ್ ಕಲಿಕಾ ಕೇಂದ್ರದ ಒಂದು ಸಣ್ಣ ಜಾಗದಲ್ಲಿ ಬೆಳೆದಿರುವ ಸಿರಿಧಾನ್ಯಗಳು ಬರಗಾಲವನ್ನು ಎದುರಿಸಿ ಹೇಗೆ ಉಳಿದುಕೊಂಡಿವೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ಪರಿಚಯ ಮಾಡಿಕೊಡಲಾಯಿತು. ಪುನರ್ಚಿತ್‌ನ ಸಲಹಾಗಾರರು ಮತ್ತು ಸಿರಿಧಾನ್ಯಗಳ ಸಂಪನ್ಮೂಲ ವ್ಯಕ್ತಿಯಾದ ದ್ವಿಜೇಂದ್ರನಾಥ್ ಗುರು ಅವರು ಕಾರ್ಯಕ್ರಮಕ್ಕೆ ಭೇಟಿ ಮಾಡುವ ಬೇರೆ ಬೇರೆ ಗುಂಪುಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಸಿರಿಧಾನಗಳ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ನಂತರ ಸಿರಿಧಾನ್ಯಗಳ ಬಗ್ಗೆ ಸಣ್ಣದೊಂದು ಚರ್ಚೆಯನ್ನು ಸಂಪನ್ಮೂಲ ವ್ಯಕ್ತಿ ಜನಾರ್ಧನ ಕೆಸರಗದ್ದೆ ಅವರು ನಡೆಸಿಕೊಟ್ಟರು. ಸಿರಿಧಾನ್ಯಗಳ ಹಾಡನ್ನು ಜನಾರ್ಧನ ಕೆಸರಗದ್ದೆ ಅವರು ರಚಿಸಿದ್ದು, ಈ ಹಾಡನ್ನು ಹೊನ್ನೇರು ಗ್ರಾಮೀಣ ಯುವಜನ ಒಕ್ಕೂಟದ ಸದಸ್ಯೆ ಮಹಾದೇವಿ ಹಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಫಲಾವ್, ಮಿಶ್ರ ಸಿರಿಧಾನ್ಯಗಳ ಪಾಯಸವನ್ನು ಉಣ ಬಡಿಸಲಾಯಿತು.


ಆಗಸ್ಟ್ ೩೦, ೨೦೧೭ ರಂದು :
ಬೀಳ್ಕೊಡಿಗೆ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಾಕ್ರಮ, ದೊಡ್ಡಮೋಳೆ ಗ್ರಾಮ

ಸಮಗ್ರ ಕಲಿಕಾ ತರಬೇತಿಯ ೫ನೇ ತಂಡದ ಬೀಳ್ಕೊಡಿಗೆ ಕಾರ್ಯಕ್ರಮವನ್ನು ದೊಡ್ಡಮೋಳೆ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಲಿಕಾರ್ಥಿಗಳು ತಮ್ಮ ಹಳ್ಳಿಯ ವಾಸ್ತವ ಅನ್ಯಾಯದ ಘಟನೆಯ ಬಗ್ಗೆ ನ್ಯಾಯ ಬೆಲೆ ಅಥವಾ ರೇಷನ್ ಅಂಗಡಿ ನಾಟಕವನ್ನು ಚೆನ್ನಾಗಿ ಅಭಿನಯಿಸಿದ್ದು, ಈ ನಾಟಕವನ್ನು ಬರ್ಟಿ ಒಲಿವೆರಾ ಅವರು ನಿರ್ದೇಶನ ಮಾಡಿದರು. ಈ ಕಾರ್ಯಕ್ರಮದಲ್ಲಿ ಸಮಗ್ರ ಕಲಿಕಾ ತರಬೇತಿಯ ಹೊನ್ನೇರು ಗ್ರಾಮೀಣ ಯುವಜನ ತಂದಡ ಸದಸ್ಯರು, ದೊಡ್ಡ ಪ್ರಮಾಣದಲ್ಲಿ ಗ್ರಾಮದವರು ಭಾಗವಹಿಸಿ ಕಾರ್ಯಾಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಿಕಾರ್ಥಿಗಳು ಸಮಗ್ರ ಕಲಿಕಾ ತರಬೇತಿಯಲ್ಲಿ ತಾವು ಏನು ಕಲಿತಿದ್ದೇವೆ ಎಂಬುದನ್ನು ಹಂಚಿಕೊಂಡರು. ತಮ್ಮ ಗ್ರಾಮದ ಅಧ್ಯಯನ ವರದಿಗಳ ಮುಖ್ಯ ಅಂಶಗಳ ಭಿತ್ತಿಪತ್ರ ಪ್ರದರ್ಶನವನ್ನು ಮಾಡಿದರು.


ಜುಲೈ ೨೯, ರಂದು ಮಣ್ಣು-ಕಣ್ಣು ಛಾಯಚಿತ್ರಗಳ ಸೈಡ್ ಷೋ ಕಾರ್ಯಕ್ರಮ.


ಜೂನ್ ೨೨ : ರಂದು ಶಿರಸಿ ಮಲೆನಾಡುಮೇಳ


ಜೂನ್ ೧೮: ರಂದು ಅಂಗರಿಕೆ ಮಾಳದ ಕಾರ್ಯಕ್ರಮ


ಮೇ ೧೫ ರಿಂದ ೩೦: ರವರೆಗೆ ಭೂಮಿ ಪ್ರಾಯೋಜಕ ನೆರವು ಕಾರ್ಯಕ್ರಮ ಆರಂಭ ಮತ್ತು ಭೂಮಿ ಉಳುಮೆ ಮತ್ತು ಬಿತ್ತನೆ ಪೂರ್ಣಗೊಂಡಿದೆ.


ಏಪ್ರಿಲ್ ೨೦: ರಂದು ಸಮಗ್ರ ಕಲಿಕಾ ತರಬೇತಿಯ ೫ನೇ ತಂಡದ ಉದ್ಘಾಟನೆ